ಕ್ಯಾಲೆಂಡರಿಂಗ್		
ಬಟ್ಟೆ, ರಬ್ಬರ್, ಕಾಗದ ಇವುಗಳ ಹಾಳೆಗಳನ್ನು ದಿಂಡುಗಳ ಅಥವಾ ಫಲಕಗಳ ನಡುವೆ ಅಧಿಕ ಸಂಮರ್ದಕ್ಕೆ ಒಳಪಡಿಸಿ ಒತ್ತಿ ಆ ಹಾಳೆಗಳನ್ನು ತೆಳುಗೊಳಿಸುವ ಅಥವಾ ನುಣುಪುಗೊಳಿಸುವ ಅಥವಾ ಹೊಳಪುಗೊಳಿಸುವ ವಿಧಾನ.  ಇದನ್ನು ಮಾಡುವ ಯಂತ್ರಕ್ಕೆ ಕ್ಯಾಲೆಂಡರ್ ಯಂತ್ರ ಎಂದು ಹೆಸರು.  ಈ ಯಂತ್ರದಲ್ಲಿ 2-12 ಸುತ್ತು ದಿಂಡುಗಳನ್ನು ಒಂದರ ಮೇಲೊಂದು ಇಟ್ಟು ಬಲವಾದ ಚೌಕಟ್ಟಿನಲ್ಲಿ ಜೋಡಿಸುವರು.  ಸಾಮಾನ್ಯವಾಗಿ ಸುತ್ತು ದಿಂಡುಗಳ ವ್ಯಾಸ 30-40 ಸೆಂ.ಮೀ.ದಿಂಡುಗಳನ್ನು ಕಬ್ಬಿಣ, ಉಕ್ಕು, ಹಿತ್ತಾಳೆ ಮತ್ತು ಕೆಲವು ಗಟ್ಟಿಮರದಿಂದ ಅಥವಾ ಅಧಿಕ ಸಂಮರ್ಧದಲ್ಲಿ ಒತ್ತಿದ ಹತ್ತಿ ಮತ್ತು ಕಾಗದದ ಉರುಳೆಗಳಿಂದ ತಯಾರಿಸುತ್ತಾರೆ.  ಲೋಹದ ದಿಂಡುಗಳ ಮೇಲೆ ಮತ್ತು ಕೆಳಗೆ ಹತ್ತಿಯಿಂದ ಮಾಡಿರುವ ದಿಂಡುಗಳನ್ನು ಜೋಡಿಸಿರುವರು.  ಈ ಯಂತ್ರವನ್ನು ಉಪಯೋಗಿಸುವಾಗ ಬಟ್ಟೆಯ ಮೇಲೆ ದಿಂಡುಗಳ ಭಾರದ ಜೊತೆಗೆ ಸಾವಿರಾರು ಕೆಜಿ ತೂಕ ಬೀಳುವ ಏರ್ಪಾಡು ಉಂಟು.  ಅಲ್ಲದೇ ಲೋಹದ ದಿಂಡುಗಳನ್ನು ಉಗಿಯಿಂದ ಕಾಯಿಸುವರು.  ಈ ಯಂತ್ರದಲ್ಲಿ ಹಾಯುವ ವಸ್ತ್ರ ಬಹು ಸ್ವಲ್ಪ ಒದ್ದೆಯಾಗಿರಬೇಕು. ಉಪಯೋಗಾನುಗುಣವಾಗಿ ಯಂತ್ರಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿರಬಹುದು.  ಹತ್ತಿ, ಲಿನನ್, ಕೃತಕ ರೇಷ್ಮೆ ಮತ್ತು ರೇಷ್ಮೆಯಿಂದ ತಯಾರಾದ ಬಟ್ಟೆಗಳಿಗೆ ತಕ್ಕಂತೆ ಈ ಯಂತ್ರವನ್ನು ಉಪಯೋಗಿಸಬೇಕು.

ಯಂತ್ರದ ಉಪಯೋಗ ಮೂರು ವಿಧ:  ಸಾದ (ಸ್ವಿಸಿಂಗ್), ಹಿಂಬಾಲಿಕೆ (ಚೇಸಿಂಗ್) ಮತ್ತು ಘರ್ಷಣ (ಫ್ರಿಕ್ಷನ್).  ಸಾದ ಕ್ರಮದಲ್ಲಿ ಬಟ್ಟೆ ಒಂದು ಮಡಿಕೆಯಲ್ಲಿ ಯಂತ್ರದ ಮೂಲಕ ಹಾಯುವುದು.  ಹಿಂಬಾಲಿಕೆ ಕ್ರಮದಲ್ಲಿ ಕನಿಷ್ಠ ಪಕ್ಷ ಎರಡು ಮಡಿಕೆಗಳು ಬಟ್ಟೆ ದಿಂಡುಗಳ ಮಧ್ಯೆ ಇರಬೇಕು.  ಘರ್ಷಣ ಕ್ರಮದಲ್ಲಿ ಬಟ್ಟೆ ಒಂದೇ ಮಡಿಕೆಯಾಗಿ ಹಾಯುವುದು.  ಆದರೆ ಇದರಲ್ಲಿ ಒಂದು ಹೊಳಪಾದ ಗಟ್ಟಿ ಲೋಹದ ದಿಂಡು ಮತ್ತೊಂದು ದಿಂಡಿಗಿಂತ ಹೆಚ್ಚು ವೇಗದಿಂದ ತಿರುಗುತ್ತದೆ.  ಇದರಿಂದಾಗಿ ಹೆಚ್ಚು ಪ್ರಕಾಶ ಬರುವುದು.

ಈ ಯಂತ್ರವನ್ನು ಉಪಯೋಗಿಸಲು ಗಮನಿಸಬೇಕಾದ ಅಂಶಗಳು:  ಲೋಹದ ದಿಂಡಿನ ಉಷ್ಣತೆ; ಬಟ್ಟೆಯ ಮೇಲೆ ಬೀಳುವ ಒತ್ತಡ; ದಿಂಡುಗಳ ಸಂಖ್ಯೆ, ಗುಣ ಮತ್ತು ವಸ್ತ್ರಚಲನ ವಿಧಾನ, ಯಂತ್ರದಲ್ಲಿ ಹಾಯುವ ಮುನ್ನ ಬಟ್ಟೆಯ ಸ್ಥಿತಿ ಎಂದರೆ ತನುವು (ಡ್ಯಾಂಪಿಂಗ್), ಗಂಜಿ ಹಾಕುವುದು ಇತ್ಯಾದಿ.  ಈ ಅಂಶಗಳ ಬದಲಾವಣೆಗಳಿಂದ ಬಟ್ಟೆಯ ಮೇಲೆ ವಿವಿಧ ಬಗೆಯ ಹೊಳಪು ಉಂಟಾಗುತ್ತದೆ.                                                           (ಬಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ